ಸಾಲುಮರದ ತಿಮ್ಮಕ್ಕ ಉದ್ಯಾನವನ ವೀಕ್ಷಿಸಿದ ಶಾಸಕ ಸಿ.ಎಸ್. ನಾಡಗೌಡ
ವರ್ಷಾಂತ್ಯಕ್ಕೆ ಸಾರ್ವಜನಿಕರಿಗೆ ಸಮರ್ಪಣೆ; ಮಿನಿ ಮೃಗಾಲಯ, ಶಿವನ ಮೂರ್ತಿ, ಜಂಗಲ್ ಲಾಡ್ಜ್ ನಿರ್ಮಾಣಕ್ಕೆ ಯೋಜನೆ
ಮುದ್ದೇಬಿಹಾಳ, ಜು. 7: ಪಟ್ಟಣದ ವಿದ್ಯಾನಗರ ಬಡಾವಣೆಯ ಹಿಂಭಾಗದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನವನ್ನು ಶಾಸಕ ಸಿ.ಎಸ್. ನಾಡಗೌಡ ಅವರು ಮಂಗಳವಾರ ವೀಕ್ಷಿಸಿದರು.
ಉದ್ಯಾನವನದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು, ನೆಡಲಾಗಿರುವ ವಿವಿಧ ಜಾತಿಯ ಗಿಡ-ಮರಗಳು ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಈ ವರ್ಷದ ಅಂತ್ಯದೊಳಗೆ ಉದ್ಯಾನವನವನ್ನು ಸಾರ್ವಜನಿಕರಿಗೆ ಸಮರ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
“ಉದ್ಯಾನವನದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿಯಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಇದು ಕೇವಲ ಕಣ್ಣಿಗೆ ಹಬ್ಬವಾಗುವ ತಾಣವಷ್ಟೇ ಅಲ್ಲ, ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೇಂದ್ರವಾಗಬೇಕು. ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ,” ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಉದ್ಯಾನವನದಲ್ಲಿ ಮಿನಿ ಮೃಗಾಲಯ (ಮಿನಿ ಝೂ) ನಿರ್ಮಿಸುವುದು, ಧಾರ್ಮಿಕ ಮಹತ್ವ ಸಾರುವ ಮೂರ್ತಿಗಳನ್ನು ಸ್ಥಾಪಿಸುವುದು ಸೇರಿದಂತೆ ಜನರನ್ನು ಸೆಳೆಯುವ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕುಳಿತಿರುವ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಆಲೋಚನೆಯೂ ಇದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ ಶಾಸಕ ನಾಡಗೌಡ, ರಸ್ತೆ ಬದಿಗಳಲ್ಲಿ ಸಾಲಾಗಿ ಗಿಡ-ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಇಲಾಖೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದರು.
ನಾಗರಬೆಟ್ಟ ಅಭಿವೃದ್ಧಿಗೆ ಸರ್ಕಾರದ ಮುಂದೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಖಾತೆ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಹೊಸ ಅರಣ್ಯ ಸಚಿವರೊಂದಿಗೆ ಈ ಕುರಿತು ಚರ್ಚಿಸಿ ಯೋಜನೆ ಮುಂದುವರಿಸಲಾಗುವುದು ಎಂದು ಹೇಳಿದರು.
“ಗಿಡ-ಮರಗಳನ್ನು ಮೇಕೆ, ಆಡುಗಳು ತಿನ್ನುತ್ತವೆ ಎಂಬುದು ತಪ್ಪು ಕಲ್ಪನೆ. ಅವುಗಳ ಸಗಣಿಯಿಂದ ಗೊಬ್ಬರ ದೊರೆಯುತ್ತದೆ. ಇದರಿಂದ ಹುಲ್ಲು ಸಹ ಉತ್ತಮವಾಗಿ ಬೆಳೆಯುತ್ತದೆ. ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ,” ಎಂದು ಅಭಿಪ್ರಾಯಪಟ್ಟರು.
ಉದ್ಯಾನವನದ ಪ್ರವೇಶ ದ್ವಾರದಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಪರಿಸರದ ಮಹತ್ವ ತಿಳಿಸುವ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಅಲ್ಲದೆ, ಉದ್ಯಾನವನದಲ್ಲಿರುವ ಪ್ರತಿಯೊಂದು ಮರ ಮತ್ತು ಗಿಡದ ವೈಶಿಷ್ಟ್ಯ ಹಾಗೂ ಉಪಯೋಗದ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಪ್ರಕೃತಿ ಹಾಗೂ ಪರಿಸರ ಶಿಕ್ಷಣಕ್ಕೆ ನೆರವಾಗುವ ರೀತಿಯ ಗಾರ್ಡನ್ ನಿರ್ಮಿಸುವುದು ಅರಣ್ಯ ಇಲಾಖೆಯ ಕನಸಾಗಿದ್ದು, ಅದಕ್ಕೆ ತಮ್ಮಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಉದ್ಯಾನವನದ ಮುಂಭಾಗದಲ್ಲಿರುವ ಸುಮಾರು ನಾಲ್ಕು ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದು, ಅಲ್ಲಿ ಜಂಗಲ್ ಲಾಡ್ಜ್ ನಿರ್ಮಿಸುವ ಯೋಜನೆಯೂ ಇದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಶಾಸಕ ನಾಡಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕ ನಾಡಗೌಡ ಅವರ ಅಭಿಮಾನಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





No comments: