Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled » ಕಳ್ಳರನ್ನು ಶೀಘ್ರ ಪತ್ತೇ ಹಚ್ಚದಿದ್ದರೆ ಪೊಲೀಸರು ಭಕ್ತರ ಆಕ್ರೋಶ ಎದುರಿಸಬೇಕಾಗುತ್ತದೆ-ನಡಹಳ್ಳಿ

 ಕಳ್ಳರನ್ನು ಶೀಘ್ರ ಪತ್ತೇ ಹಚ್ಚದಿದ್ದರೆ ಪೊಲೀಸರು ಭಕ್ತರ ಆಕ್ರೋಶ ಎದುರಿಸಬೇಕಾಗುತ್ತದೆ-ನಡಹಳ್ಳಿ

ಮುದ್ದೇಬಿಹಾಳ: ಲಕ್ಷಾಂತರ ಭಕ್ತರನ್ನು ಹೊಂದಿರುವ ಬಸರಕೋಡದ ಶ್ರೀ ಪವಾಡ ಬಸವೇಶ್ವರರ 32-35 ಕೆಜಿ ಬೆಳ್ಳಿ ಮೂರ್ತಿ ಕಳ್ಳತನವಾಗಿರುವುದು ಭಕ್ತ ಸಮೂಹಕ್ಕೆ ಅಪಾರ ನೋವು ನೀಡಿದೆ. ಪೊಲೀಸರು ಈಗಾಗಲೇ ತನಿಖೆ ನಡೆಸತೊಡಗಿದ್ದಾರೆ. ಆದಷ್ಟು ಬೇಗ ಕಳ್ಳರನ್ನು ಪತ್ತೇ ಹಚ್ಚಿ ಮೂರ್ತಿಯನ್ನು ಮರಳಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲು ಸಹಕರಿಸಬೇಕು. ತನಿಖೆಯಲ್ಲಿ ಲೋಪ, ನಿರ್ಲಕ್ಷ್ಯ ಕಂಡು ಬಂದಲ್ಲಿ ಅಥವಾ ಕಳ್ಳರನ್ನು ಶೀಘ್ರವೇ ಪತ್ತೇ ಹೆಚ್ಚುವಲ್ಲಿ ವಿಫಲರಾದರೆ ಭಕ್ತರ ಆಕ್ರೋಶವನ್ನು ಪೊಲೀಸ್ ಅಧಿಕಾರಿಗಳು ಎದುರಿಸಬೇಕಾಗುತ್ತದೆ ಎಂದು ದೇವಸ್ಥಾನಕ್ಕೆ 50 ಕೆಜಿ ಮೌಲ್ಯದ ಬೆಳ್ಳಿ ಮುಖ ಕವಚಗಳನ್ನುಹರಕೆಯ ರೂಪದಲ್ಲಿ ದಾನವಾಗಿ ನೀಡಿರುವ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಎಚ್ಚರಿಸಿದರು.

ಗುರುವಾರ ಬಸರಕೋಡ ಗ್ರಾಮದಲ್ಲಿರುವ ಶ್ರೀ ಪವಾಡ ಬಸವೇಶ್ವರರ ದೇವಸ್ಥಾನಕ್ಕೆ ಭೇಟಿ ನೀಡಿ, ಕಳ್ಳತನದ ವಿವರಗಳನ್ನು ಪಡೆದುಕೊಂಡು, ಭಕ್ತರ ಮತ್ತು ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.


ಪವಾಡ ಬಸವೇಶ್ವರರು ಪವಾಡ ಪುರುಷರು. ಅವರಿಂದ ಅನೇಕ ಪವಾಡಗಳು ನಡೆದಿವೆ. ಅವರಿಗೆ ನೋವು ಕೊಟ್ಟವರು ಯಾರೂ ಉದ್ದಾರ ಆಗಿಲ್ಲ. ದೇವಸ್ಥಾನದಲ್ಲಿ ಸದಾ ಭಕ್ತರ ಚಟುವಟಿಕೆ ಇರುತ್ತದೆ. ನಿತ್ಯವೂ ನೂರಾರು ಸಾಧು ಸಂತರು ಅಲ್ಲೇ ಇರುತ್ತಾರೆ. ನಿತ್ಯ ದಾಸೋಹ ವ್ಯವಸ್ಥೆಯೂ ಅಲ್ಲಿದೆ. ದೇವಸ್ಥಾನದ ಶಕ್ತಿ ಮೂರ್ತಿಯಂತಿದ್ದ ಬೆಳ್ಳಿ ಕವಚ ಕಳುವಾಗಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ವಿಷಯ ತಿಳಿದ ಕೂಡಲೇ ಬೆಂಗಳೂರಿನಲ್ಲಿದ್ದ ನಾನು ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವೈ.ಬಿರಾದಾರ ಅವರೊಂದಿಗೆ ಮಾತನಾಡಿ ನೋವು ತೋಡಿಕೊಂಡು ಕಳವಳ ವ್ಯಕ್ತಪಡಿಸಿದ್ದೇನೆ. ಭಕ್ತರು ಕೊಟ್ಟ ಕಾಣಿಕೆಯನ್ನು ಕಳ್ಳತನ ಮಾಡುತ್ತಾರೆ ಎಂದು ಊಹಿಸಿಯೂ ಇರಲಿಲ್ಲ ಎಂದರು.


ಘಟನೆ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಗಮನಕ್ಕೆ ತಂದು ಅವರೊಂದಿಗೆ ಮಾತನಾಡಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ಕೋರಿಕೊಂಡಿದ್ದೇನೆ. ನಡಹಳ್ಳಿ ಕುಟುಂಬ ಶ್ರೀ ಪವಾಡ ಬಸವೇಶ್ವರರ ಆಶೀರ್ವಾದದಿಂದಲೇ ಮುಂದೆ ಬಂದಿದೆ. ನನ್ನಂತೆ ಅನೇಕ ಭಕ್ತರು ಬದುಕಲ್ಲಿ ಸಾಫಲ್ಯ ಕಂಡುಕೊಂಡಿದ್ದಾರೆ. ಶಾಸಕ ನಾಡಗೌಡರು ದೇವಸ್ಥಾನಕ್ಕೆ 5 ಎಕರೆ ಭೂಮಿಯನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ. ಅವರೂ ಈ ದೇವಸ್ಥಾನದ ಭಕ್ತರೇ ಆಗಿರುವುದರಿಂದ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಎಂದರು.

ದೇವರ ಮೂರ್ತಿ ಕಳ್ಳತನ ಮಾಡಿದವರು ಜೀವನದಲ್ಲಿ ಎಂದಿಗೂ ನೆಮ್ಮದಿಯಿಂದ ಇರುವುದು ಸಾಧ್ಯವಿಲ್ಲ. ಅವರೆಂದೂ ಮುಂದೆ ಬರುವುದಿಲ್ಲ. ಕಳ್ಳರು ತಮ್ಮ ತಪ್ಪನ್ನು ಒಪ್ಪಿಕೊಂಡು ಮೂರ್ತಿಯನ್ನು ದೇವಸ್ಥಾನಕ್ಕೆ ಮರಳಿಸಬೇಕು. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರು ಒಂದಿಲ್ಲ ಒಂದು ದಿನ ಸಿಕ್ಕಿ ಹಾಕಿಕೊಳ್ಳುತ್ತಾರೆ. ದೇವಸ್ಥಾನದ ಸಿಸಿ ಕ್ಯಾಮರಾ ವ್ಯವಸ್ಥೆ ಬಂದ್ ಆಗಿದ್ದರ ಕುರಿತು ತನಿಖೆ ನಡೆಸುವುದು ಸೂಕ್ತ. ಇದಲ್ಲದೆ ಬಸರಕೋಡದಿಂದ ಹೊರಹೋಗುವ ಎಲ್ಲ ರಸ್ತೆಗಳಲ್ಲೂ ಇರುವ ಸಿಸಿ ಫೂಟೇಜ್ ಪರಿಶೀಲಿಸಿದರೆ ಕಳ್ಳರ ಮುಖವಾಡ ಬಯಲಾಗುತ್ತದೆ. ಈ ದೇವಸ್ಥಾನಕ್ಕೆ ಎಲ್ಲ ಜಾತಿ, ಜನಾಂಗದ ಭಕ್ತರೂ ಇದ್ದಾರೆ. ಕಳ್ಳತನವಾಗಿರುವ ಮೂರ್ತಿ ಮರಳಿ ದೇವಸ್ಥಾನಕ್ಕೆ ಬರಬೇಕು ಎನ್ನುವುದೇ ಎಲ್ಲರ ಹಂಬಲವಾಗಿದೆ ಎಂದರು.

ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವೈ.ಬಿರಾದಾರ, ಪ್ರಮುಖ ಭಕ್ತರಾದ ಸಿದ್ದು ಮೇಟಿ, ರಾಜು ಮೇಟಿ, ತಿಪ್ಪಣ್ಣ ಯಾಳವಾರ, ಶರಣಪ್ಪ ಕೊಣ್ಣೂರ, ಗುರುನಾಥಗೌಡ ಬಿರಾದಾರ, ಮಂಜುನಾಥ ಚಲವಾದಿ, ಡಾ|ಬೇಲ್ಯಾಳ, ಶರಣಗೌಡ ಹಂಡರಗಲ್ಲ, ಬಿಜೆಪಿ ಕಾರ್ಯದರ್ಶಿ ಗಿರೀಶಗೌಡ ಪಾಟೀಲ ಹಿರೇಮುರಾಳ ಸೇರಿದಂತೆ ಹಲವರು ಇದ್ದರು. ಇದಕ್ಕೂ ಮುನ್ನ ನಡಹಳ್ಳಿಯವರು ಶ್ರೀ ಪವಾಡ ಬಸವೇಶ್ವರರ ಗರ್ಭಗುಡಿ ವೀಕ್ಷಿಸಿ ಮೂರ್ತಿ ಕಳ್ಳತನ ಸಂಪೂರ್ಣ ವಿವರ ಪಡೆದುಕೊಂಡರು.




«
Next
Newer Post
»
Previous
Older Post

No comments:

Leave a Reply