“ಬೆಳೆ ವಿಮೆ ಪರಿಹಾರ ಮತ್ತು CCE ಸಮೀಕ್ಷೆ ಅಕ್ರಮಗಳ ವಿರುದ್ಧ ರೈತರ ಪ್ರತಿಭಟನೆ”
![]() |
| ಸುದ್ಧಿಗಾಗಿ ಸಿದ್ದು ನ್ಯೂಸ್ ಸಂಪಾದಕರು ಸಿದ್ದು ಚಲವಾದಿ ಉಪ ಸಂಪಾದಕರು ಮುನೀರ್ ಅವಟಿಗೇರ್ |
ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು 2019 ರಿಂದ 2026 ರವರೆಗೆ ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆ ಕಂತುಗಳನ್ನು ನಿಯಮಿತವಾಗಿ ಪಾವತಿಸಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಸರಿಯಾದ ಮಳೆಯ ಕೊರತೆ, ಅತಿವೃಷ್ಟಿ ಕೀಟಬಾಧೆ, ರೋಗಬಾಧೆ ಹಾಗೂ ಇತರೆ ಪ್ರಕೃತಿ ವಿಕೋಪಗಳಿಂದ ರೈತರ ಬೆಳೆಗಳು ತೀವ್ರ ಹಾನಿಗೊಳಗಾಗಿದ್ದರೂ ಸಹ ರೈತರಿಗೆ ನ್ಯಾಯಯುತ ವಿಮೆ ಪರಿಹಾರ ದೊರೆತಿಲ್ಲ.
ಇದಕ್ಕೆ ಮುಖ್ಯ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಬೆಳೆ ನಷ್ಟದ ಕುರಿತು ನಿಯಮಾನುಸಾರ ಸಮೀಕ್ಷೆ ನಡೆಸದೇ, Crop Cutting Experiment (CCE) ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡದೇ, ವಿಮೆ ಕಂಪನಿಗಳೊಂದಿಗೆ ಸೇರಿಕೊಂಡು ತಪ್ಪು ವರದಿಗಳನ್ನು ಸಲ್ಲಿಸಿರುವುದು ಎಂಬ ಗಂಭೀರ ಆರೋಪ ರೈತರಿಂದ ಕೇಳಿಬರುತ್ತಿದೆ. ಇದರ ಪರಿಣಾಮವಾಗಿ ರೈತರು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದು ವಿಮೆ ಯೋಜನೆಯ ನೈಜ ಪ್ರಯೋಜನದಿಂದ ವಂಚಿತರಾಗಿದ್ದಾರೆ.
ಪಕ್ಕದ ಗ್ರಾಮ ಪಂಚಾಯಿತಿಗಳ ರೈತರಿಗೆ ವಿಮೆ ಪರಿಹಾರ ದೊರೆತಿದ್ದರೂ, ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಸರಿಯಾದ ಬೆಳೆ ಸಮೀಕ್ಷೆಯ ಕೊರತೆಯಿಂದ ನ್ಯಾಯ ಸಿಗದೆ ಉಳಿದಿದೆ.
ಆದ್ದರಿಂದ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುತ್ತದೆ:
1. 2019 ರಿಂದ 2025 ರವರೆಗೆ ನಡೆದ ಎಲ್ಲಾ CCE ಸಮೀಕ್ಷೆಗಳ ಪರಿಶೀಲನೆ ನಡೆಸಬೇಕು.
2. ಬೆಳೆ ಸಮೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು.
3. ತಪ್ಪು ವರದಿ ಸಲ್ಲಿಸಿರುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
4. ವಿಮೆ ಕಂಪನಿಗಳ ಪಾತ್ರವನ್ನು ತನಿಖೆ ಮಾಡಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.
5. ರೈತರಿಗೆ ಬಾಕಿ ಇರುವ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು.
6. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದಿರುವ CCE ವರದಿಗಳನ್ನು ಸಾರ್ವಜನಿಕಗೊಳಿಸಬೇಕು.
7. ಸಮೀಕ್ಷೆ ವೇಳೆ ರೈತರ ಉಪಸ್ಥಿತಿ ಕಡ್ಡಾಯಗೊಳಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಬೇಕು.
8. GPS, ಛಾಯಾಚಿತ್ರ ಹಾಗೂ ಡಿಜಿಟಲ್ ದಾಖಲೆಗಳ ಆಧಾರದ ಮೇಲೆ ಸಮೀಕ್ಷೆ ನಡೆದಿದೆಯೇ ಎ೦ಬುದನ್ನು ಪರಿಶೀಲಿಸಬೇಕು.
9. ರೈತರಿಗೆ ಸಮೀಕ್ಷೆ ವರದಿ ಹಾಗೂ ಇಳುವರಿ ಅಂದಾಜಿನ ಪ್ರತಿಗಳನ್ನು ನೀಡಬೇಕು.
10. ಭವಿಷ್ಯದಲ್ಲಿ ಯಾವುದೇ ಅಕ್ರಮ ನಡೆಯದಂತೆ ವಿಶೇಷ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕು.
11. ಕಳೆದ ಐದು ವರ್ಷಗಳಿಂದ ರೈತರಿಗೆ ಉಂಟಾಗಿರುವ ಆರ್ಥಿಕ ನಷ್ಟಕ್ಕೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು.
12. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಸಾರ್ವಜನಿಕ ವಿಚಾರಣೆ ನಡೆಸಬೇಕು.
30. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿನಾಂಕ 20-06-2026 ರಂದು ಬೆಳಿಗ್ಗೆ 10:00 ಗಂಟೆಗೆ ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ರೈತರು ಪ್ರತಿಭಟನೆ ಹಮ್ಮಿಕೊಂಡಿರುತ್ತಾರೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತಾಲ್ಲೂಕು ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವಿಮೆ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಲಾಗುತ್ತದೆ.
ಒಂದು ವೇಳೆ ಅಧಿಕಾರಿಗಳು ರೈತರ ಮನವಿಗೆ ಸ್ಪಂದಿಸದೆ, ಸಮಸ್ಯೆಗಳನ್ನು ಪರಿಹರಿಸಲು ಮುಂದಾಗದೆ ನಿರ್ಲಕ್ಷ್ಯ ವಹಿಸಿದಲ್ಲಿ, ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿ ಮುಂದಿನ ದಿನಗಳಲ್ಲಿ ರಸ್ತೆ ತಡೆ ಸೇರಿದಂತೆ ಉಗ್ರ ಹೋರಾಟ ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ. ಇದಕ್ಕೆ ಸಂಪೂರ್ಣ ಹೊಣೆಗಾರಿಕೆ ಸ೦ಬ೦ಧಪಟ್ಟ ಅಧಿಕಾರಿಗಳು ಹಾಗೂ ವಿಮೆ ಕಂಪನಿಗಳದ್ದಾಗಿರುತ್ತದೆ.
ಆದ್ದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ತಕ್ಷಣ ಸ್ಥಳಕ್ಕೆ ಆಗಮಿಸಿ ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ವಿನಂತಿಸಿಕೊಳ್ಳುತ್ತೇವೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ತ ರೈತರ ಪರವಾಗಿ





No comments: