ಕರಾಟೆ-ಯೋಗ ತರಬೇತಿಗೆ ಪ್ರತ್ಯೇಕ ಶಿಕ್ಷಕರನ್ನೇ ನೇಮಿಸಿ: ಸರ್ಕಾರಕ್ಕೆ ಶಿವಕುಮಾರ ಶಾರದಳ್ಳಿ
**ಪಿಎಂ-ಶ್ರೀ ಯೋಜನೆಯಡಿ ಕರಾಟೆ ಮತ್ತು ಯೋಗ ತರಬೇತಿಗೆ ಒಂದೇ ಶಿಕ್ಷಕರ ನೇಮಕ ಅವೈಜ್ಞಾನಿಕ: ಆದೇಶ ಹಿಂಪಡೆಯಲು ಕರಾಟೆ ತರಬೇತುದಾರ ಶಿವಕುಮಾರ ಶಾರದಳ್ಳಿ ಆಗ್ರಹ**
ಮುದ್ದೇಬಿಹಾಳ: ಕೇಂದ್ರ ಪುರಸ್ಕೃತ **ಪಿಎಂ-ಶ್ರೀ (PM-SHRI)** ಯೋಜನೆಯಡಿ ರಾಜ್ಯದ 590 ಸರ್ಕಾರಿ ಶಾಲೆಗಳಲ್ಲಿ 2026–27ನೇ ಸಾಲಿನ **ಪ್ರಾಜೆಕ್ಟ್ ಅಪ್ರೂವಲ್ ಬೋರ್ಡ್ (ಪಿಎಬಿ)** ಅನುಮೋದಿತ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಸಮಗ್ರ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿನ ಕರಾಟೆ ಮತ್ತು ಯೋಗ ತರಬೇತಿಯನ್ನು ಒಂದೇ ಶಿಕ್ಷಕರಿಂದ ನಡೆಸುವ ಪ್ರಸ್ತಾವನೆ ಅವೈಜ್ಞಾನಿಕವಾಗಿದ್ದು, ಅದನ್ನು ಕೂಡಲೇ ಹಿಂಪಡೆಯುವ ಅನಿವಾರ್ಯತೆ ಎದುರಾಗಿದೆ ಕರಾಟೆ ತರಬೇತುದಾರ ಶಿವಕುಮಾರ ಶಾರದಳ್ಳಿ ಆಗ್ರಹಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುವ ಜವಾಬ್ದಾರಿಯನ್ನು ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಹಿಸಿತ್ತು. ಆದರೆ ದೈಹಿಕ ಶಿಕ್ಷಣ ಶಿಕ್ಷಕರಿಂದ ಗುಣಮಟ್ಟದ ಕರಾಟೆ ತರಬೇತಿ ನೀಡುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರಿಗೆ ಮೊದಲು ಕರಾಟೆ ತರಬೇತಿ ನೀಡಿ ನಂತರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಮತ್ತೊಂದು ಆದೇಶ ಹೊರಡಿಸಲಾಗಿತ್ತು. ಈ ಎರಡೂ ಕ್ರಮಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ಬಳಿಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ಮನವಿಯನ್ನು ಪರಿಗಣಿಸಿದ ಸರ್ಕಾರ, ಆಯಾ ಜಿಲ್ಲೆಗಳಲ್ಲಿರುವ ತರಬೇತಿ ಪಡೆದ ಕರಾಟೆ ಶಿಕ್ಷಕರ ಮೂಲಕವೇ ನೇರವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ತಂದಿತು. ಈ ಕ್ರಮ ಯಶಸ್ವಿಯಾಗಿದ್ದು, ಶಿಕ್ಷಣ ಇಲಾಖೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಹಾಗೂ ಅಲ್ಪ ಪ್ರಮಾಣದ ಗೌರವಧನದೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕರಾಟೆ ತರಬೇತಿ ನೀಡಲಾಗುತ್ತಿದೆ.
ಆದರೆ 2026–27ನೇ ಸಾಲಿನ ಹೊಸ ಸುತ್ತೋಲೆಯಲ್ಲಿ ಕರಾಟೆ ತರಬೇತಿಯ ಜೊತೆಗೆ ಯೋಗ ತರಬೇತಿಯನ್ನೂ ಸೇರಿಸಿ ಒಂದೇ ಶಿಕ್ಷಕರಿಂದ ಎರಡೂ ತರಬೇತಿಗಳನ್ನು ನೀಡುವಂತೆ ಸೂಚಿಸಿರುವುದು ಪ್ರಾಯೋಗಿಕವಾಗಿಯೂ ವೈಜ್ಞಾನಿಕವಾಗಿಯೂ ಸೂಕ್ತವಲ್ಲ. ಯೋಗ ಮತ್ತು ಕರಾಟೆ ಎರಡೂ ವಿಭಿನ್ನ ಸ್ವರೂಪದ ತರಬೇತಿಗಳಾಗಿದ್ದು, ಅವುಗಳಿಗೆ ಪ್ರತ್ಯೇಕ ಪರಿಣಿತಿ ಹಾಗೂ ಬೋಧನಾ ವಿಧಾನ ಅಗತ್ಯವಿದೆ. ಆದ್ದರಿಂದ ಎರಡೂ ವಿಷಯಗಳನ್ನು ಒಬ್ಬರೇ ಶಿಕ್ಷಕರು ಸಮರ್ಪಕವಾಗಿ ಬೋಧಿಸುವುದು ಸಾಧ್ಯವಿಲ್ಲ.
ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ತರಬೇತಿಯ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಪ್ರಸ್ತುತ ಸುತ್ತೋಲೆಯಲ್ಲಿನ ಈ ನಿಯಮವನ್ನು ಸರ್ಕಾರ ಮರುಪರಿಶೀಲಿಸಿ, ಕರಾಟೆ ಮತ್ತು ಯೋಗ ತರಬೇತಿಗೆ ಪ್ರತ್ಯೇಕ ಪರಿಣಿತ ಶಿಕ್ಷಕರನ್ನು ನೇಮಿಸುವಂತೆ ಕ್ರಮ ಕೈಗೊಳ್ಳಬೇಕಿದೆ ಹಾಗೂ ಇದರ ಬಗ್ಗೆ ರಾಜ್ಯ ಕರಾಟೆ ಶಿಕ್ಷಕರ ಸಂಘದವರೊಂದಿಗೆ ಚರ್ಚಿಸಿ ಸೂಕ್ತ ಮಾರ್ಗಸೂಚನೆಗಳನ್ನು ಸರಕಾರ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
ಫೋಟೊ:1ಎಂಬಿಎಲ್1: ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರ ಶಿವಕುಮಾರ ಶಾರದಳ್ಳಿ.
ಫೋಟೊ:1ಎಂಬಿಎಲ್2: ಸಮಗ್ರ ಶಿಕ್ಷಣ ಇಲಾಖೆಯಿಂದ ಹೊರಡಿಸಿದ ಆದೇಶದ ಪ್ರತಿ.




No comments: