‘ಜೀಯೋ ಔರ್ ಜೀನೇ ದೆವ್ ಎಂದಿದ್ದ ದೇಶಮುಖರು :ರಮೇಶ ಕತ್ತಿ
ನಾಲತವಾಡ: ಅಗಲಿದ ಮಾಜಿ ಸಚಿವರಾದ ದಿ.ದೇಶಮುಖ ದಂಪತಿಗಳು ನಾಡಿನ ಕೊಂಡಿಯಾಗಿ ಕೆಲಸ ಮಾಡಿದ್ದರು, ಆದರೆ ಇಂದಿನ ಕಲುಷಿತ ರಾಜಕೀಯ ಕ್ಷೇತ್ರವು ಪ್ರಜಾಪ್ರಭುತ್ವವವನ್ನೇ ತಲೆ ಕೆಳಗೆ ಮಾಡಿದೆ ಎಂದು ಬೆಳಗಾವಿ ಮಾಜಿ ಸಂಸದರಾದ ರಮೇಶ ಕತ್ತಿ ಹೇಳಿದರು.
ಇಲ್ಲಿಯ ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಸಚಿವರಾದ ದಿ.ಜೆ.ಎಸ್.ದೇಶಮುಖ ಅವರ 36ನೇ ಹಾಗೂ ಮಾಜಿ ಸಚಿವೆ ದಿ.ವಿಮಲಾಬಾಯಿ ದೇಶಮುಖ ದಂಪತಿಗಳ 8ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.
ದೇಶಮುಖರು ಸಾವೀರಾರು ಎಕರೆ ಜಮೀನು, ನೂರಾರು ಮನೆಗಳನ್ನು ಬಡವರಿಗೆ ದಾನ ಮಾಡಿದರೂ ಅವರಿಂದ ಒಂದು ಪೈಸೆನೂ ಪಡೆಯಲಿಲ್ಲ ಇಂತಹ ರಾಜಕಾರಣಿಗಳು ಅಪರೂಪ ಎಂದರು. ದೇಶಮುಖರು ಜೀವೋ ಔರ್ ಜೀನೆ ದೇವ್ ಎಂದಿದ್ದರು, ಅವರ ದೇಹ ಅಗಲಿದರೂ ಅವರು ಮಾಡಿದ ಸಾಧನೆಗಳು ಅಜರಾಮವಾಗಿವೆ ಎಂದರು. ದೇಶಮುಖ ಅವರು ಈ ನಾಡು ಕಂಡ ಶುದ್ಧ ಹಸ್ತದ ರಾಜಕಾರಣಿ ಎಂದರು.
ಮಾಜಿ ಸಚಿವರಾದ ಕಲಬುರ್ಗಿಯ ಎಸ್.ಕೆ.ಕಾಂತಾ ಮಾತನಾಡಿ ದೇಶಮುಖರು ಎಂದಿಗೂ ಜಾತಿ ಭೇದವನ್ನು ಮಾಡಿದವರಲ್ಲ, ಮೊರಾರ್ಜಿ ದೇಸಾಯಿ ಸೇರಿದಂತೆ ರಾಮಕೃಷ್ಣ ಹೆಗಡೆಯವರ ಒಡನಾಡಿಯಾಗಿ ಕೆಲಸ ಮಾಡಿದ್ದ ದೇಶಮುಖರಿಗೆ ನಾನು ದೇಶಮುಖ ಎನ್ನುವ ಎಂದಿಗೂ ಭಾವನೆ ಇರಲಿಲ್ಲ ಎಂದರು.
ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ ದೇಶಮುಖ ಅಗಲಿಲ್ಲ, ಅವರು ಇನ್ನೂ ಜೀವಂತ ಇದ್ದಾರೆ, ಯಾವ ವ್ಯಕ್ತಿ ಸಮಾಜದಲ್ಲಿ ವಿಭಿನ್ನವಾಗಿ ಬದುಕುತ್ತಾನೋ ಅವರು ಎಂದಿಗೂ ಸತ್ತವರಲ್ಲ, ಅವರ ಸಾಧನೆ ಈ ಭೂಮಿ ಮೇಲೆ ಇರುತ್ತದೆ, ದೇಶಮುಖ ಅವರು ತಮ್ಮ ಬದುಕಿಗೆ ಬಡಿದಾಡಲಲ್ಲಿ, ಇಬ್ಬರೂ ದಂಪತಿಗಳು ಸತ್ತು ಜೀವಂತ ಇದ್ದವರ ಸಾಲಿನಲ್ಲಿದ್ದಾರೆ ಎಂದರು.
ಇಲಕಲ್‌ನ ಚಿತ್ತರಗಿ ಸಂಸ್ಥಾನ ಮಠದ ಡಾ.ಗುರು ಮಹಾಂತಸ್ವಾಮೀಗಳು ಆಶೀರ್ವನ ನೀಡಿ, ಮತದಾರರು ಯಾವದೇ ಆಮಿಷಕ್ಕೆ ಒಳಗಾಗದೇ ಶುದ್ದ ಹಸ್ತದಿಂದ ಮತ ನೀಡುವ ಮೂಲಕ ಅಭಿವೃದ್ದಿ ಮತ್ತು ಸಾಮಾಜೀಕ ಕೆಲಸ ಕಾರ್ಯಗಳಿಗೆ ಆಯ್ಕೆಯಾದವರನ್ನು ಅಂಗಿ ಹಿಡಿದು ಕೇಳುವ ಪ್ರವೃತ್ತಿ ಬೆಳಿಸಿಕೊಳ್ಳಿ ಎಂದರು.
ಬಾಕ್ಸ್:
ಇತ್ತೀಚಿಗೆ ರಚನೆಗೊಂಡ ಸಚಿವ ಸಂಪುಟವನ್ನು ಟೀಕಿಸಿದ ಮಾಜಿ ಸಂಸದ ರಮೇಶ ಕತ್ತಿಯವರು, ಕಳ್ಳರನ್ನು ಮಂತ್ರಿ ಮಾಡಿದ್ದಾರೆ, ಎಲ್ಲಾ ಸಚಿವ ಸ್ಥಾನಗಳು ಖಾಲಿಯಾದರೂ ಹರಿಸಿಣ, ಕೊತ್ತಂಬರಿ, ಕರಿಬೇವು ಸ್ಥಾನಗಳನ್ನು ಸೃಷ್ಟಿಸಿ ಆ ಸ್ಥಾನಗಳಿಗೂ ಮಂತ್ರಿಗಳನ್ನು ಮಾಡುವ ಸಮಯ ದೂರವಿಲ್ಲ, ತಪ್ಪು ಮಾಡಿದವರನ್ನು ಮಂತ್ರಿ ಮಾಡಿದ್ದಾರೆ ಇದು ನಮ್ಮ ರಾಜ್ಯದ ದುರಂತ, ಪ್ರಜಾಪ್ರಭುತ್ವದ ವ್ಯವಸ್ಥೆ ಹದಗೆಟ್ಟಿದೆ, ಯುವ ಪೀಳಿಗೆ ಎಚ್ಚರಗೊಂಡು ಇಂತಹ ಹೊಲಸು ರಾಜಕೀಯ ವ್ಯವಸ್ಥೆಗೆ ಪಾಠ ಕಲಿಸುವ ಪ್ರಜೆಗಳಾಗಿ ಎಂದ ಅವರು ಮತ್ತೇ ದೇಶಮುಖ ಮನೆತನದ ಕುಡಿ ರಾಜಕೀಯ ಅಖಾಡಕ್ಕೆ ಬರಲೇಬೇಕು ಎಂದು ಮನವಿ ಮಾಡಿಕೊಂಡು.
ಹಿರೂರಿನ ಸಿ.ಎಸ್.ಬಿರಾದಾರ ಮಾತನಾಡಿ ತಾಲೂಕಿನಲ್ಲಿ ಶುದ್ದ ಹಸ್ತದ ರಾಜಕೀಯ ನೆಲೆಯೂರಲಿ ಮತ್ತೇ ದೇಶಮುಖ ಮನೆತನದ ಕುಡಿಗಳು ಸ್ಪರ್ಧೆಗಿಳಿಯಲಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಪಾಟೀಲ, ಮುತ್ತು ಅಂಗಡಿ, ಸಂಗಮೇಶ ಮೇಟಿ, ಸಿ.ಎಸ್.ಬಿರಾದಾರ ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ಪಾರಿತೋಷಕ ಸೇರಿ ಐಟಿಐ, ಪ್ರೌಢ, ಪದವಿ ಸೇರಿದಂತೆ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವೀರೇಶ ವಾಲಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಶಿರೂರಿನ ಬಸವರಾಜ ಮಹಾಸ್ವಾಮೀಗಳು, ಚವನಬಾವಿಯ ಶರಣಮ್ಮ ಅಮ್ಮನವರು, ಶಂಕರರಾವ್ ದೇಶಮುಖ, ಗುರುಪ್ರಸಾದ್ ದೇಶಮುಖ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಕಾಶೀಬಾಯಿ ರಾಂಪೂರ, ಕಸಾಪ ಮಾಜಿ ಅಧ್ಯಕ್ಷರಾದ ಎಂ.ಬಿ.ನಾವದಗಿ, ಸತೀಶ ಓಸ್ವಾಲ್, ಭೀರಪ್ಪ ಸಾಸನೂರ, ಈರಣ್ಣ ತಡಸದ, ಬಿ.ಕೆ.ಬಿರಾದಾರ, ಮಿಣಜಗಿಯ ಪಾಟೀಲ ಇದ್ದರು. ಶಿಕ್ಷಕರಾದ ರಾಜು ಹಾದಿಮನಿ ಹಾಗೂ ಅಮ್ಮಾಜಿಗೋಳ ಗುರುಮಾತೆ ನಿರೂಪಿಸಿದರು.
ದಿ.ದೇಶಮುಖ ದಂಪತಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿದರು.




No comments: