ತಂಗಡಗಿ ರಸ್ತೆಯಲ್ಲಿ ನೂಲಿಚಂದಯ್ಯನವರ ಮೂರ್ತಿ ಪ್ರತಿಷ್ಠಾಪನೆ
ಮುದ್ದೇಬಿಹಾಳ: ಪಟ್ಟಣದ ತಂಗಡಗಿ ರಸ್ತೆಯಲ್ಲಿ ಶನಿವಾರ ಶ್ರೀ ಶಿವಶರಣ ನೂಲಿಚಂದಯ್ಯನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮ ಶಾಸಕ ಸಿ.ಎಸ್. ನಾಡಗೌಡ, ಕರ್ನಾಟಕ ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹಾಗೂ ವಿವಿಧ ಸಮಾಜಗಳ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಶಾಸಕ ಸಿ.ಎಸ್. ನಾಡಗೌಡ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ನೂಲಿಚಂದಯ್ಯನವರ ಮೂರ್ತಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ನಾಡಗೌಡ, “ಮಕ್ಕಳಿಗೆ ಶಿಕ್ಷಣವೇ ದೊಡ್ಡ ಆಸ್ತಿ. ಸಮಾಜದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು. ನೂಲಿಚಂದಯ್ಯನವರ ಕಾಯಕ, ಆದರ್ಶ ಹಾಗೂ ಸಮಾನತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಮಾತನಾಡಿ, ಮುದ್ದೇಬಿಹಾಳದಲ್ಲಿ ನೂಲಿಚಂದಯ್ಯನವರ ಮೂರ್ತಿ ನಿರ್ಮಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಮುದಾಯದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ನೂಲಿಚಂದಯ್ಯನವರ ಆದರ್ಶ ಹಾಗೂ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಕೇವಲ ಮೂರ್ತಿ ಪ್ರತಿಷ್ಠಾಪಿಸುವುದಷ್ಟೇ ಅಲ್ಲದೆ ನೂಲಿಚಂದಯ್ಯನವರ ಕಾಯಕ, ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಹಾಗೂ ಮಕ್ಕಳು ಉತ್ತಮ ಸಂಸ್ಕಾರ ಬೆಳೆಸಿಕೊಂಡು ತಂದೆ-ತಾಯಿ ಮತ್ತು ಹಿರಿಯರನ್ನು ಗೌರವಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಭಜಂತ್ರಿ, ಪ್ರಧಾನ ಕಾರ್ಯದರ್ಶಿ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಅಂಬಿ ಜೋಗಿ, ಕೊರಂ ಆನಂದ ಏಕಲವ್ಯ, ಜಿಲ್ಲಾಧ್ಯಕ್ಷ ರವೀಂದ್ರ ಜಾದವ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆಬಿಜೆಎನ್‌ಎಲ್ ಅಧಿಕಾರಿ ಮಲ್ಲಾಲಿಂಗ ಭಜಂತ್ರಿ ಅವರು ನೂಲಿಚಂದಯ್ಯನವರ ಮೂರ್ತಿಗೆ ಕಾಣಿಕೆ ನೀಡಿದರು. ಸುರೇಶ ಭಜಂತ್ರಿ ಪ್ರಾಸ್ತಾವಿಕ ನುಡಿ ನೀಡಿದರು. ಟಿ.ಡಿ. ಲಮಾಣಿ ನಿರೂಪಿಸಿದರು.




No comments: